ಕೀಬಲ್, ರಾಬರ್ಟ್

1887-1927, ಇಂಗ್ಲಿಷ್ ಕಾದಂಬರಿಗಾರ. ಬೆಡ್‍ಫರ್ಡ್‍ಷೈರಿನಲ್ಲಿ ಜನಿಸಿದ ಈತನ ಪ್ರೌಢವ್ಯಾಸಂಗ ಕೇಂಬ್ರಿಜ್‍ನಲ್ಲಾಯಿತು. 1911ರಲ್ಲಿ ಕ್ರೈಸ್ತ ಧರ್ಮಬೋಧಕನಾಗಿ ದೀಕ್ಷೆಪಡೆದು ಆಫ್ರಿಕದ ದೇಶಗಳಲ್ಲಿ ಧರ್ಮಪ್ರಸಾರಕನಾಗಿ ಸಂಚರಿಸಿದ. ಬಸುಟೊಲ್ಯಾಂಡ್‍ನ ಲೆರಿಬ್ ಎಂಬಲ್ಲಿ ಚರ್ಚಿನ ಮುಖ್ಯಸ್ದನಾದ. ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿದ. ದಕ್ಷಿಣ ಆಫ್ರಿಕದ ಸೇನೆಯಲ್ಲಿ ಧರ್ಮಗುರುವಾಗಿ ಸೇವೆ ಸಲ್ಲಿಸಿದ. ಆ ದಿನಗಳ ತನ್ನ ಅನುಭವಗಳನ್ನೆಲ್ಲ ಸೇರಿಸಿ ಸ್ಟ್ಯಾಂಡಿಂಗ್ ಬೈ ಎಂಬ ಪ್ರಥಮ ಕಾದಂಬರಿಯನ್ನು ಬರೆದು 1919ರಲ್ಲಿ ಪ್ರಕಟಿಸಿದ. ಈ ಕೃತಿಗೆ ಸಿಕ್ಕ ಪ್ರೋತ್ಸಾಹದಿಂದ 1921ರಲ್ಲಿ ಮತ್ತೊಂದು ಕಾದಂಬರಿಯನ್ನು ಬರೆದ. ಅದರ ಹೆಸರು ಸೈಮನ್ ಕಾಲ್ಡ್ ಪೀಟರ್. ಕೀಬಲ್ ಇದರಲ್ಲಿ ಕ್ರೈಸ್ತದರ್ಮದ ಬಗ್ಗೆ ಇದ್ದ ತನ್ನ ನಂಬಿಕೆ ಶ್ರದ್ಧೆಗಳನ್ನು ಕಳೆದುಕೊಂಡ ಬಗೆಯನ್ನು ನಿವೇದಿಸಿದ್ದ. ಈ ಪುಸ್ತಕ ವಾಚಕವೃಂದದಲ್ಲಿ ದೊಡ್ಡ ಕೋಲಾಹಲವನ್ನೆಬ್ಬಿಸಿ ಬಹು ಪ್ರಸಿದ್ಧವಾಯಿತು. ಕಾದಂಬರಿಕಾರನಿಗೆ ಅಪಾರವಾದ ಖ್ಯಾತಿಯೂ ಹಣವೂ ಲಭಿಸಿದವು. ಈ ಕಾದಂಬರಿಯ ಮುಂದಿನಭಾಗ ಎಂಬಂತೆ ಬಂದ ರಿಕಾಂಪೆನ್ಸ್ (1925) ಅಷ್ಟು ಜನಪ್ರಿಯವಾಗಲಿಲ್ಲ.

 ಆರೋಗ್ಯ ಕಾರಣಗಳಿಗಾಗಿ ಕೀಬಲ್ ದಕ್ಷಿಣ ಸಾಗರದ ದ್ವೀಪವೊಂದರ ಆರೋಗ್ಯ ಧಾಮಕ್ಕೆ ಹೋಗಿ ನೆಲಸಿದ ಮೇಲೆ 1926ರಲ್ಲಿ ತಾಹಿತಿ, ಐಲ್ ಆಫ್ ಡ್ರೀಮ್ಸ್, ಮತ್ತು ದಿ ಗ್ರೇಟ್ ಗೆಲಿಲಿಯನ್ ಎಂಬ ಮೂರು ಕಾದಂಬರಿಗಳನ್ನು ಬರೆದ. ತನ್ನ ಧರ್ಮದ ಬಗ್ಗೆ ಈತನಿಗೆ ಮೊದಲು ಶ್ರದ್ಧೆ ಉಂಟಾದುದೂ ಕಡೆಯಲ್ಲಿ ಅದು ಕಳೆದುಹೋದುದೂ ಹಾಗಿರಲಿ, ಇವನು ಬರೆದ ಕಾದಂಬರಿಗಳಲ್ಲೆಲ್ಲ ಆ ಧರ್ಮ ಬೋಧಕ ಮನೋಧರ್ಮ ಅಚ್ಚೊತ್ತಿರುವುದು ಕಂಡುಬರುತ್ತದೆ.          

 

 (ಕೆ.ಬಿ.ಪಿ.ಎಚ್.ವಿ.ಎಸ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ